ಗ್ರೀನ್, ಹೆನ್ರಿ ಗ್ರಹಾಮ್

1904- . ನವ್ಯಕಾವ್ಯ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡು, ಧರ್ಮ ಅಧರ್ಮಗಳ ಜಂಜಾಟಕ್ಕೆ ಸಿಕ್ಕಿ ತೊಳಲುವ ಮಾನವನ ಸ್ಥಿತಿ ಮತ್ತು ದೇವಮಾನವರ ಸಂಬಂಧವನ್ನು ಅದ್ಭುತವಾಗಿ ಚಿತ್ರಿಸಿರುವ ಇಂಗ್ಲಿಷ್ ಕಾದಂಬರಿಕಾರ. ಹಾರ್ಟ್‍ಫರ್ಡ್‍ಷೈರಿನ ಬರ್ಕ್‍ಹ್ಯಾಮ್ ಸ್ಟೆಡ್‍ನಲ್ಲಿ ಹುಟ್ಟಿದ ಈತ ಅದೇ ಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಬ್ಯಾಲಿಯಲ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಪಡೆದ. 1926ರಲ್ಲಿ ಸ್ವಪ್ರೇರಣೆಯಿಂದ ರೋಮನ್ ಕ್ಯಾಥೊಲಿಕ್ ಪಂಗಡವನ್ನು ಸೇರಿದ. ಈ ಮತಾಂತರ ಈತನ ಜೀವನದಲ್ಲಿ ಎಷ್ಟು ಮಹತ್ತ್ವಪೂರ್ಣವೋ ಸಾಹಿತ್ಯ ಸೃಷ್ಟಿಯಲ್ಲೂ ಅಷ್ಟೇ ಮಹತ್ತ್ವಪೂರ್ಣವಾಗಿದೆ. ಈ ಮತಾಂತರ ಈತನ ಜೀವನದಲ್ಲಿ ಸ್ಥಿರತೆ ದೊರಕಿಸಿಕೊಟ್ಟುದ್ದಲ್ಲದೆ ಹಲವು ಕಾದಂಬರಿಗಳಿಗೆ ಸ್ಫೂರ್ತಿ ನೀಡಿತು.

ವಿಮರ್ಶಕರು ಈತನ ಕಾದಂಬರಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸುತ್ತಾರೆ. ಮೊದಲನೆಯ ಗುಂಪಿನಲ್ಲಿ ಕೇವಲ ಮನೋರಂಜನೆಗಾಗಿ ರಚಿಸಿದ ಕಾದಂಬರಿಗಳು ಬರುತ್ತವೆ. ಉದಾ : ಸ್ಟಾಮ್‍ಬೌಲ್ ಟ್ರೇನ್ (1932). ಎ ಗನ್ ಫಾರ್ ಸೇಲ್ (1936), ಇಟ್ಸ್ ಎ ಬ್ಯಾಟಲ್‍ಫೀಲ್ಡ್ (1934) ಇತ್ಯಾದಿ. ಎರಡನೆಯ ಗುಂಪಿನಲ್ಲಿ ಗಂಭೀರವಾದ, ವೈಶಿಷ್ಟ್ಯಪೂರ್ಣವಾದ ಕಾದಂಬರಿಗಳು ಬರುತ್ತವೆ. ಉದಾ : ದಿ ಪವರ್ ಅಂಡ್ ದಿ ಗ್ಲೋರಿ (1940), ದಿ ಹಾರ್ಟ್ ಆಫ್ ದಿ ಮ್ಯಾಟರ್ (1948), ದಿ ಎಂಡ್ ಅಫ್ ದಿ ಅಫೈರ್ (1951) ಇತ್ಯಾದಿ. ದಿ ಪವರ್ ಅಂಡ್ ದಿ ಗ್ಲೋರಿಗೆ ಹಾತಾರನ್‍ಡನ್ ಬಹುಮಾನ ಬಂದಿದೆ. ಈತನ ರಚನಾತಂತ್ರ, ಪ್ರತಿಭೆ ಮತ್ತು ವಿಶಿಷ್ಟಶಕ್ತಿಯನ್ನು ಎರಡನೆಯ ಗುಂಪಿನ ಕಾದಂಬರಿಗಳಲ್ಲಿ ಕಾಣಬಹುದು.

ದಿ ಮ್ಯಾನ್ ವಿದಿನ್ (1929), ದಿ ನೇಮ್ ಆಫ್ ಆ್ಯಕ್ಷನ್ (1930), ದಿ ರೂಮರ್ ಆಟ್ ನೈಟ್‍ಫಾಲ್ (1931)-ಇವು ಮೊದಲ ಮೂರು ಕಾದಂಬರಿಗಳು. ಇವುಗಳಲ್ಲಿ ಇಂಗ್ಲೆಂಡಿನ ಪ್ರಸಿದ್ಧ ಕಾದಂಬರಿಕಾರರಾದ ರಾಬರ್ಟ್ ಲೂಯಿ ಸ್ಟೀವನ್‍ಸನ್, ವರ್ಜಿನಿಯ ವುಲ್ಫ್ ಮತ್ತು ಜೋಸೆಫ್ ಕಾನ್ರಾಡ್ ಅವರ ಅಭಿಪ್ರಾಯವನ್ನು ಕಾಣಬಹುದು. 1936ರಲ್ಲಿ ಪ್ರಕಟವಾದ ಇಂಗ್ಲೆಂಡ್ ಮೇಡ್ ಮಿ ಎಂಬ ಕೃತಿಯಲ್ಲಿ ಈತನದೇ ಆದ ವೈಯಕ್ತಿಕ ಶೈಲಿ ರೂಪುಗೊಂಡಿದೆ.

  	ಧಾರ್ಮಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಸೂಕ್ಷ್ಮವಾದ ನೈತಿಕ ವಿಷಯಗಳನ್ನೋ ಆಧ್ಯಾತ್ಮಿಕ ತತ್ತ್ವಗಳನ್ನೋ ತನ್ನ ಕೃತಿಗಳಲ್ಲಿ ಅಳವಡಿಸುವ ಸಾಹಸವನ್ನು ಈತ ಮಾಡಿದ್ದಾನೆ. ಗ್ರೀಕ್ ದುರಂತನಾಟಕಗಳಲ್ಲಿ ಕಾಣುವ ಪ್ರಧಾನಾಂಶವನ್ನು ಹಿಂಸಾಚಾರದಿಂದ ಹೊರಹೊಮ್ಮುವ ವಿಧಿಪ್ರಾಬಲ್ಯವನ್ನು ಈತನ ಕೆಲವು ಕಾದಂಬರಿಗಳಲ್ಲಿ ಕಾಣುತ್ತೇವೆ.

  	ಈತ ನಿಷ್ಠಾವಂತ ರೋಮನ್ ಕ್ಯಾಥೊಲಿಕ್ ಸಂಪ್ರದಾಯದ ಪ್ರಕಾರ ದೈವ ನಿಯಮದಂತೆ ಎಲ್ಲವೂ ನಡೆಯುತ್ತದೆ ; ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಪಾಪಿಗೂ ದೈವ ರಕ್ಷಣೆಯಿದೆ ಎಂಬ ತತ್ತ್ವಕ್ಕೆ ಅಂಟಿದವ. ಆದ್ದರಿಂದಲೇ ದಿ ಪವರ್ ಅಂಡ್ ದಿ ಗ್ಲೋರಿಯಲ್ಲಿ ಕುಡುಕನೂ ವ್ಯಭಿಚಾರಿಯೂ ಆದ ಪಾದ್ರಿ ಪಾಪದಿಂದ ಪಾಪಕ್ಕೆ ಜಿಗಿಯುತ್ತ ಹೋಗುತ್ತಿದ್ದರೂ ಅಂತಿಮವಾಗಿ ಹುತಾತ್ಮರ ದಿವ್ಯವಲಯದಲ್ಲಿ ವಿರಾಜಿಸುತ್ತಾನೆ; ದಿ ಹಾರ್ಟ್ ಆಫ್ ದಿ ಮ್ಯಾಟರ್ ಕಾದಂಬರಿಯ ತನ್ನಲ್ಲಿದ್ದ ಎಲ್ಲವನ್ನೂ ಕಳೆದುಕೊಂಡ ಸ್ಕೋಬಿ ಕೊನೆಯ ಗಳಿಗೆಯಲ್ಲಿ ರಕ್ಷಣೆ ಪಡೆಯುತ್ತಾನೆ.

  	ಈತನ ಕಾದಂಬರಿಗಳಲ್ಲಿ ಬರುವ ಘಟನಾವಳಿಗಳು ಮತ್ತು ಪಾತ್ರಗಳು ಒಂದು ವಿಶಿಷ್ಟವಾದ ಇಂಗ್ಲಿಷ್ ಸಂಪ್ರದಾಯ ಹಾಗೂ ವಿದೇಶಗಳ ಹಿನ್ನಲೆಯನ್ನು ಪಡೆದಿವೆ. ಮೆಕ್ಸಿಕೋದಲ್ಲಿಯ ಮತೀಯ ಕಿರುಕುಳಗಳು, ಇಂಡೋ-ಚೀನದಲ್ಲಿಯ ಯುದ್ಧ, ಆಫ್ರಿಕದ ಕುಷ್ಠರೋಗಪೀಡಿತ ಪ್ರದೇಶಗಳು, ಹೈತಿಯಲ್ಲಿನ ರಾಜಕೀಯ ದಬ್ಬಾಳಿಕೆ-ಇವು ಕೆಲವು ಕಾದಂಬರಿಗಳಲ್ಲಿ ಹಿನ್ನಲೆಯಾಗಿ ಬಂದು ಕಥೆಗಳಿಗೆ ಅವರ್ಣನೀಯ ಸೌಂದರ್ಯವನ್ನು ನೀಡುತ್ತವೆ. ಕಥಾನಾಯಕನ ಕಷ್ಟನಷ್ಟ, ಧೈರ್ಯಸ್ಥೈರ್ಯಗಳು, ಜನರ ಡಂಭಾಚಾರ, ನೀಚತನ, ಸ್ವಾರ್ಥಜನರಿಂದ ಸುತ್ತುವರಿಯಲ್ಪಟ್ಟ ಮಾನವ ಹೇಗೆ ಜೀವನದಲ್ಲಿ ಹೋರಾಡಿ, ಬದುಕಿ ಬಾಳುತ್ತಾನೆ ಎಂಬ ವಿಚಾರಗಳು ಈತನ ಕಾದಂಬರಿಗಳಲ್ಲಿ ವಸ್ತುನಿಷ್ಠವಾಗಿ ಮೂಡಿವೆ.

  	ಭೌಗೋಳಿಕ ಹಿನ್ನೆಲೆ ಈತನ ರಚನಾತಂತ್ರದ ಒಂದು ವಿಶಿಷ್ಟ ಅಂಶವಾದರೆ ಮಾರ್ಮಿಕ ಸಂಭಾಷಣೆ, ಪ್ರತಿಮೆಗಳು ಮತ್ತು ಸಾಂಕೇತಿಕ ಶಬ್ದಗಳ ಬಳಕೆ ಈತನ ತಂತ್ರದ ಮತ್ತೊಂದು ಅಂಶ. ಕೆಲವು ಕಡೆ ಬರುವ ರೂಪಕಾಲಂಕಾರ ಕಾದಂಬರಿಗಳಿಗೆ ಸ್ಥಳೀಯ ಬಣ್ಣವನ್ನು ನೀಡುವುದರ ಜೊತೆಗೆ ಕೇಂದ್ರತತ್ತ್ವಕ್ಕೆ ಬಲವನ್ನೂ ನೀಡುತ್ತದೆ. ಈತನ ಕಾದಂಬರಿಗಳೆಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿದರೆ ಮೂರು ದಶಕಗಳ (1930-1960) ಸಾಮಾಜಿಕ ಜೀವನ, ಅಂತರಾಷ್ಟ್ರೀಯ ಪರಿಸ್ಥಿತಿ, ರಾಜಕೀಯ ಬದಲಾವಣೆಗಳು-ಇವು ಓದುಗರ ಕಣ್ಣು ಮುಂದೆ ನಿಲ್ಲುತ್ತವೆ.

  	ಈತನ ಕಾದಂಬರಿಗಳಲ್ಲಿ ಬರುವ ಕೆಲವು ಪದಗಳು ಸಾಂಕೇತಿಕ ಅರ್ಥವನ್ನು ಕೊಡುತ್ತವೆಂದು ವಿಮರ್ಶಕರ ಅಭಿಪ್ರಾಯ. ಉದಾ : ಬ್ರೈಟನ್ ರಾಕ್ (1938) ಕಾದಂಬರಿಯಲ್ಲಿ ಲಂಚಕೋರ ವಕೀಲ ಡ್ರೂಯಿಟ್ಟನ ಮಾತುಗಳು ಆ ಕಾಲದ ಒಟ್ಟು ಜೀವನದ ಸ್ಥಿತಿ, ಬ್ರೈಟನ್ ಊರಿನ ಪರಿಸ್ಥಿತಿ, ಕಾದಂಬರಿಯ ಮುಖ್ಯ ವ್ಯಕ್ತಿಯಾದ ಪಿಂಕೀಯ ಅವಸ್ಥೆಯ ಚಿತ್ರವನ್ನು ಕಣ್ಣಿನ ಮುಂದೆ ತಂದು ನಿಲ್ಲಿಸುತ್ತವೆ.

  	ಗ್ರೀನನ ಪ್ರಸಿದ್ಧ ಕಾದಂಬರಿ ದಿ ಹಾರ್ಟ್ ಆಫ್ ದಿ ಮ್ಯಾಟರ್‍ನ ಕಥೆ ಪಶ್ಚಿಮ ಆಫ್ರಿಕದ ಬ್ರಿಟಿಷ್ ನೆಲಸುನಾಡಿನಲ್ಲಿ ನಡೆಯುತ್ತದೆ. ಇದು ಈತನ ಅತ್ಯುತ್ತಮ ಕಾದಂಬರಿ. ಈ ಕಾದಂಬರಿ ಈತನ ರಚನಾಕೌಶಲ, ಪಾತ್ರಸೃಷ್ಟಿ, ಮೋಹಕಗದ್ಯ ಶೈಲಿ-ಎಲ್ಲಕ್ಕೂ ಉತ್ಕøಷ್ಟ ನಿದರ್ಶನವಾಗಿದೆ.

  	ಈತ ಕಾದಂಬರಿಗಳನ್ನಲ್ಲದೆ ದಿ ಲಿವಿಂಗ್ ರೂಮ್ (1953) ಎಂಬ ಜನಪ್ರಿಯ ನಾಟಕವನ್ನೂ ರಚಿಸಿದ್ದಾನೆ. ನಾರ್ವೀಜಿಯನ್ ನಾಟಕಕಾರ ಹೆನ್ರಿಕ್ ಇಬ್ಸೆನನ ತಂತ್ರವನ್ನು ಪ್ರಯೋಗಿಸಿ ಬರೆದ ಈ ನಾಟಕ ಬಹು ಜನರ ಮೆಚ್ಚುಗೆ ಪಡೆದಿದೆ. ದಿ ಪಾಟಿಂಗ್ ಷೆಡ್ (1957), ದಿ ಕಂಪ್ಲೇಸೆಂಟ್ ಲವರ್ (1959) ಎಂಬ ಮತ್ತೆರಡು ನಾಟಕಗಳಿಂದಲೂ ಈತನ ಕೀರ್ತಿ ಹೆಚ್ಚಿದೆ.

  	ಮಕ್ಕಳ ಕಥೆಗಳನ್ನೂ ಪ್ರವಾಸಿ ಸಾಹಿತ್ಯವನ್ನೂ ಕೆಲವು ಪ್ರಬಂಧಗಳನ್ನೂ ರಚಿಸಿದ ಗ್ರೀನ್ ಕೆಲವು ಕಾಲ ಪತ್ರಿಕೋದ್ಯಮಿಯಾಗಿಯೂ ಇದ್ದ.

  	20ನೆಯ ಶತಮಾನದ ಪ್ರಭಾವಶಾಲಿ ಸಾಹಿತಿಗಳಲ್ಲಿ ಈತನ ಸ್ಥಾನ ವಿಶಿಷ್ಟವಾದುದು.		    (ಎನ್.ಎನ್.ಎಸ್.ಎ.)
(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ